ಮಂಗಳೂರು, ಜುಲೈ 10: ಮಂಗಳೂರು ನಗರದ ಕೊಡಿಯಾಲಬೈಲ್ನಲ್ಲಿರುವ ಪ್ರತಿಷ್ಠಿತ ಕೆನರಾ ಶಾಲೆಯ 2026-27ನೇ ಸಾಲಿನ ಶಾಲಾ ಸಂಸತ್ತಿನ ಪದಗ್ರಹಣವು ಶುಕ್ರವಾರದಂದು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕೊಡಿಯಾಲಬೈಲ್ನ ಟಿ.ವಿ. ರಮಣ್ ಪೈ ಕನ್ವೆನ್ಷನ್ ಸೆಂಟರ್ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಇನ್ನರ್ವ್ಹೀಲ್ ಜಿಲ್ಲೆ 318ರ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಜನಿ ಭಟ್ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾಯಕತ್ವ ಎಂಬುದು ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ. ಶಾಲಾ ಹಂತದಲ್ಲೇ ಇಂತಹ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಪೂರಕ" ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಹೈಸ್ಕೂಲ್ ಅಸೋಸಿಯೇಷನ್ನ ಅಧ್ಯಕ್ಷರಾದ ಡಿ. ವಾಸುದೇವ ಕಾಮತ್ ಅವರು ವಹಿಸಿದ್ದರು. ನೂತನವಾಗಿ ಆಯ್ಕೆಯಾದ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಅವರು ಬ್ಯಾಡ್ಜ್ ಗಳನ್ನು ನೀಡಿ, "ವಿದ್ಯಾರ್ಥಿ ನಾಯಕರು ಶಿಸ್ತು ಮತ್ತು ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು", ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ ಉಪಾಧ್ಯಕ್ಷರಾದ ಕೆ.ಸುರೇಶ್ ಕಾಮತ್, ಶಾಲೆಯ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಕವಿತಾ ಮೌರ್ಯ, ಕೆನರಾ ಸಹ ಸಂಸ್ಥೆಗಳ ಮುಖ್ಯ ಶಿಕ್ಷಕಿಯರು, ಆಡಳಿತ ಮಂಡಳಿ ಪದಾಧಿಕಾರಿಗಳು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೂತನ ನಾಯಕರಿಗೆ ಬ್ಯಾಡ್ಜ್ ಹಾಗೂ ಸ್ಯಾಶಗಳನ್ನು ಧರಿಸುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. ಪೋಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಮುಕ್ತಾಯಗೊಂಡಿತು.
